October 29, 2026

ಪಾವಗಡದ ಆರ್‌ಎಂಸಿ ಮಾರುಕಟ್ಟೆಯಲ್ಲಿ ಹೈಡ್ರಾಮಾ

ಪತಿ ಕೈಕೊಟ್ಟಿದ್ದಾನೆಂದು ಆರೋಪಿಸಿ ಬಿಎಸ್‌ಎನ್‌ಎಲ್ ಟವರ್ ಏರಲು ಮುಂದಾದ ಮಹಿಳೆ; ಪೊಲೀಸರಿಂದ ಸುರಕ್ಷಿತ ಕಾರ್ಯಾಚರಣೆ

ಪಾವಗಡ: ಪಟ್ಟಣದ ಆರ್‌ಎಂಸಿ ಮಾರುಕಟ್ಟೆ ಆವರಣದಲ್ಲಿರುವ ಬಿಎಸ್‌ಎನ್‌ಎಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಮಹಿಳೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕಲ್ಯಾಣದುರ್ಗ ಮೂಲದ ಸಿಂಧು ಎಂಬ ಮಹಿಳೆ, ಪಾವಗಡ ತಾಲೂಕಿನ ದೊಂಡೆನಹಳ್ಳಿ ಗ್ರಾಮದ ಗಣೇಶ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದೆ. ಆದರೆ ಮದುವೆಯಾದ ಬಳಿಕ ಗಣೇಶ್ ಕುಟುಂಬದವರು ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಪತಿ ತನ್ನನ್ನು ಬಿಟ್ಟು ಹೋಗಿದ್ದಾನೆ. ಅಲ್ಲದೆ, ಪತಿ ಗಣೇಶ್ ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ಸಿಂಧು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಕೂಡ ಟವರ್ ಏರಿ ಪ್ರತಿಭಟನೆ ನಡೆಸಿದ್ದಾಗಿ ಹೇಳಿರುವ ಅವರು, ಪೊಲೀಸರು ಮನವೊಲಿಸಿ ಕೆಳಗಿಳಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಇದೀಗ ಪಾವಗಡದ ಆರ್‌ಎಂಸಿ ಮಾರುಕಟ್ಟೆಯಲ್ಲಿರುವ ಬಿಎಸ್‌ಎನ್‌ಎಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಮಹಿಳೆ ಟವರ್ ಏರಲು ಮುಂದಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪಾವಗಡ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ನೇತೃತ್ವದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆಯನ್ನು ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ನಂತರ ಪೊಲೀಸರು ಮಹಿಳೆಯನ್ನು ಅರಸೀಕೆರೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಪ್ರೀತಿ, ಮದುವೆ ಹಾಗೂ ಪತಿಯೊಂದಿಗಿನ ವಿವಾದ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಮಹಿಳೆಯ ಆರೋಪಗಳ ಕುರಿತು ಸಂಬಂಧಪಟ್ಟ ಪೊಲೀಸರು ಪರಿಶೀಲನೆ ನಡೆಸಬೇಕಿದೆ.

Please follow and like us:
Pin Share